ಗ್ರಾಫೆ -
ಕಾರ್ಲ್ ಫರ್ಡಿನಾಂಡ್ ಫಾನ್ ಗ್ರಾಫೆ (1787-1840) ಮತ್ತು ಆತನ ಮಗ ಆಲ್‍ಬ್ರೆಕ್ಟ್ ಡಬ್ಲು. ಇ. ಫಾನ್ ಗ್ರಾಫೆ (1828-70). ಜರ್ಮನಿಯ ಪ್ರಸಿದ್ಧ ವೈದ್ಯರು. ಕಾರ್ಲ್ ಫರ್ಡಿನಾಂಡ್ ಪೋಲೆಂಡಿನ ವಾರ್ಸದಲ್ಲಿ ಹುಟ್ಟಿ ಜರ್ಮನಿಯಲ್ಲಿ ಶಿಕ್ಷಣ ಪಡೆದು ಬರ್ಲಿನ್ನಿನಲ್ಲಿ ಶಸ್ತ್ರವೈದ್ಯ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಅಂಗವಿಕಾರಗಳನ್ನು ಸರಿಪಡಿಸಿ ಸುರೂಪಕ್ಕೆ ತರಲು ಬಳಸುವ ಪ್ಲಾಸ್ಟಿಕ್ ಶಸ್ತ್ರವೈದ್ಯವಿಧಾನವನ್ನು ಜರ್ಮನಿಯಲ್ಲಿ ಮೊತ್ತ ಮೊದಲು ಪ್ರಾರಂಭಿಸಿ ಅದರಲ್ಲಿ ಪರಿಣತಿಯನ್ನು ಪಡೆದು ಪ್ಲಾಸ್ಟಿಕ್ ಶಸ್ತ್ರವೈದ್ಯದ ಅಧ್ವರ್ಯುವೆಂದು ಹೆಸರು ಪಡೆದ. ಜೊತೆಗೆ ದೇಹದಲ್ಲಿನ ರಕ್ತ ಪೂರೈಕೆ, ಸಿಸೇರಿಯನ್ ಶಸ್ತ್ರ ವೈದ್ಯವೆಂದು ಹೆಸರಾದ ಗರ್ಭಕೋಶದ ಕೊಯ್ತದಿಂದ ಮಾಡುವ ಹೆರಿಗೆ, ಮೂಗನ್ನು ಸುರೂಪಗೊಳಿಸುವಿಕೆ, ಬಾಯಿಯ ಹರಿದ ಅಟ್ಟವನ್ನು ಸರಿಪಡಿಸುವಿಕೆ ಮುಂತಾದ ವಿಧಾನಗಳಲ್ಲಿ ವಿನೂತನ ಬದಲಾವಣೆಗಳನ್ನು ಮಾಡಿ ಗಣನೀಯ ಪ್ರಗತಿ ಸಾಧಿಸಿದ. ಮಗ ಆಲ್‍ಬ್ರೆಕ್ಟ್ ಜೀವಿಸಿದ್ದು ಕೇವಲ 42 ವರ್ಷಗಳ ವರೆಗೆ. ಈತ ಕಣ್ಣುರೋಗಗಳಲ್ಲಿ ಅನೇಕ ಶೋಧನೆಗಳನ್ನು ಮಾಡಿ 19ನೆಯ ಶತಮಾನದ ಪ್ರಮುಖ ನೇತ್ರ ವೈದ್ಯನೆನಿಸಿಕೊಂಡ. ಈತನನ್ನು ನೇತ್ರರೋಗ ಪ್ರಾಧ್ಯಾಪಕನಾಗಿ 1878ರಲ್ಲಿ ನೇಮಕ ಮಾಡಲಾಯಿತು. ದೃಷ್ಟಿ ಮಾಂದ್ಯಗೊಳಿಸುವ ಮೋತಿಬಿಂದುವನ್ನು ಕೊಯ್ದು ಹೊರತೆಗೆಯುವ ಶಸ್ತ್ರ ಚಿಕಿತ್ಸೆಯನ್ನು ಇವನು ಯಶಸ್ವಿಯಾಗಿ ಜಾರಿಗೆ ತಂದ (1867). ಗುರಾಣಿಕ ಗ್ರಂಥಿಯ ಅಂತಃಸ್ರಾವದ ಹೆಚ್ಚುವರಿಯಾಗಿರುವ ರೋಗಸ್ಥಿತಿಯಲ್ಲಿ ಕಣ್ಣಿನ ರೆಪ್ಪೆಯಲ್ಲಿ ತೋರುವ ವಿಶಿಷ್ಟ ಲಕ್ಷಣಕ್ಕೆ ಈತನ ಹೆಸರನ್ನೇ ಕೊಡಲಾಗಿದೆ (1864). ಕಣ್ಣು ಗುಡ್ಡೆಯಲ್ಲಿ ಏರಿದ ಒತ್ತಡಸ್ಥಿತಿಗೆ (ಗ್ಲಾಕೋಮ್) ಪಾಪೆಕೊಯ್ತದ (ಐರಿಡೆಕ್ಟೊಮಿ) ವಿಧಾನವನ್ನು ಕಂಡುಹಿಡಿದ (1857). ಒಂದು ಕಣ್ಣಿನ ರೋಗಸ್ಥಿತಿಯಿಂದಾಗಿ ಇನ್ನೊಂದು ಕಣ್ಣು ವಿನಾಕಾರಣ ಸಹಭಾಗಗೊಳ್ಳುವ ಸ್ಥಿತಿಯನ್ನು (ಸಿಂಪಥೆಟಿಕ್ ಆಫ್ ಥಾಲ್ಮಿಯ) ವಿವರಿಸಿದ (1866). ಮಿದುಳಿನ ರೋಗಗಳಲ್ಲಿ ಮತ್ತು ಹೆಚ್ಚುವರಿ ರಕ್ತ ಒತ್ತಡ ರೋಗದಲ್ಲಿ ಕೆಲವು ವೇಳೆ ಕುರುಡೂ, ದೃಷ್ಟಿಮಾಂದ್ಯವೂ ಉಂಟಾಗುವುದರಿಂದ ಆ ಘಟ್ಟಕ್ಕೆ ಪೂರ್ವವೇ ನೇತ್ರದರ್ಶಕದಿಂದ (ಆಪ್ಥಾಲ್ಮಾಸ್ಕೋಪ್) ಕಣ್ಣುಪರೀಕ್ಷೆಮಾಡಿ ರೋಗಗಳನ್ನು ಗುರುತಿಸುವ ವಿಧಾನವನ್ನು ಸಾರ್ವತ್ರಿಕವಾಗಿ ಬಳಕೆಗೆ ತಂದದ್ದು ಆಲ್‍ಬ್ರೆಕ್ಟನೇ. ಕ್ಷಯರೋಗ ಪೀಡಿತನಾಗಿ ತೀರ ತರುಣಪ್ರಾಯದಲ್ಲೇ ಮರಣ ಹೊಂದಿದ.
(ಡಿ.ಎಸ್.ಎಸ್.; ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ